ಯಲ್ಲಾಪುರ: ಪ್ರತಿ ತಾಲೂಕಿಗೂ ಒಂದು ರಕ್ತ ನಿಧಿ ಬ್ಯಾಂಕ್ ಅಗತ್ಯವಿದೆ ಎಂದು ಶಿರಸಿ ಟಿ ಎಸ್ ಎಸ್ ಶ್ರೀಪಾದ ಹೆಗಡೆ ವೈದ್ಯಕೀಯ ವಿಜ್ಞಾನ ಸಂಸ್ಥೆಯ ಮೆಡಿಕಲ್ ಆಫಿಸರ್ ಡಾ. ಪಿ.ಎಸ್ ಹೆಗಡೆ ಅವರು ಹೇಳಿದರು.
ಅವರು ಬುಧವಾರ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಆವಾರದಲ್ಲಿ ವಿಶ್ವದರ್ಶನ ಸೇವಾ ವತಿಯಿಂದ ನಡೆದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು.
ಪ್ರತಿಯೊಬ್ಬರಿಗೂ ತಮ್ಮ ರಕ್ತದ ಗುಂಪುನ ಬಗ್ಗೆ ಅರಿವಿರಬೇಕು. ಅಪಘಾತದಂತಹ ತುರ್ತು ಪರಿಸ್ಥಿತಿಯಲ್ಲಿ ರಕ್ತ ಮಾತ್ರ ಮನುಷ್ಯನನ್ನು ಬದುಕಿಸಬಲ್ಲದು. ಪುರುಷರು ವರ್ಷಕ್ಕೆ 4 ಬಾರಿ, ಮಹಿಳೆಯರು 3 ಬಾರಿ ರಕ್ತದಾನ ಮಾಡಬಹುದಾಗಿದ್ದು, ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ರಕ್ತದಾನ ಮಾಡಬೇಕು ಎಂದು ಹೇಳಿದರು. ಈಚೆಗೆ ರಕ್ತದಾನದ ಬಗ್ಗೆ ಜನರಲ್ಲಿ ಜಾಗೃತಿ ಮೂಡುತ್ತಿದೆ. ಹೀಗಾಗಿ ಪ್ರತಿ ತಾಲೂಕಿನಲ್ಲಿ ರಕ್ತನಿಧಿ ಬ್ಯಾಂಕ್ ಸ್ಥಾಪನೆಯಾಗಬೇಕು. ಈ ನಿಟ್ಟಿನಲ್ಲಿ ಜನಪ್ರತಿನಿಧಿ ಹಾಗೂ ಅಧಿಕಾರಿಗಳು ಪ್ರಯತ್ನಿಸಬೇಕು ಎಂದು ಅವರು ಒತ್ತಾಯಿಸಿದರು.
ತಾಲೂಕಾ ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ್ ಅವರು ಮಾತನಾಡಿ, ರಕ್ತದಾನ ಅತ್ಯಂತ ಶ್ರೇಷ್ಠವಾದ ದಾನವಾಗಿದೆ. ರಕ್ತದಾನದೊಂದಿಗೆ ನೇತ್ರದಾನ ಹಾಗೂ ಅಂಗಾoಗ ದಾನಕ್ಕಾಗಿ ಸರ್ಕಾರಿ ಆಸ್ಪತ್ರೆಯಲ್ಲಿ ಹೆಸರು ನೋಂದಣಿ ಪ್ರಕ್ರಿಯೆ ಶುರುವಾಗಿದೆ ಎಂದರು. ಇದೇ ವೇಳೆ ರಕ್ತನಿಧಿ ಬ್ಯಾಂಕ್ ಸ್ಥಾಪನೆಗಾಗಿ ಪ್ರಸ್ತಾವನೆ ಕಳುಹಿಸುವ ಬಗ್ಗೆ ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ಅವರು ಮಾತನಾಡಿ, ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರಕ್ಕಾಗಿ ವಿಶ್ವದರ್ಶನ ಸಂಸ್ಥೆ ಶ್ರಮಿಸುತ್ತಿದೆ. ಸಂಸ್ಥೆಯ ಸಿಬ್ಬಂದಿ ಹಾಗೂ ಪಾಲಕರಿಗಾಗಿ ಸಂಸ್ಥೆ ವತಿಯಿಂದ ಸಮೂಹ ವಿಮೆ ಮಾಡಿಸಲಾಗುತ್ತದೆ ಎಂದರು. ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ, ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಇತರರು ಇದ್ದರು. ಕವಿತಾ ಹೆಬ್ಬಾರ್ ನಿರ್ವಹಿಸಿ, ವಂದಿಸಿದರು.