ಯಲ್ಲಾಪುರ: ಜೀವನದ ಅನೇಕ ಪ್ರಶ್ನೆಗಳಿಗೆ ಭಗವದ್ಗೀತೆ ಉತ್ತರ ಕೊಡುತ್ತದೆ. ಹೀಗಾಗಿ ವಿದ್ಯಾರ್ಥಿಗಳು ಉತ್ತಮ ಪುಸ್ತಕಗಳನ್ನು ಓದುವ ಹವ್ಯಾಸ ಬೆಳಸಿಕೊಳ್ಳಬೇಕು ಎಂದು ಸಮಾಜ ಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕರಾದ ಮನೀಶ್ ನಾಯಕ್ ಅವರು ಹೇಳಿದರು.
ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ವಿಶ್ವದರ್ಶನ ಕರಿಯರ್ ಅಕಾಡೆಮಿ ವತಿಯಿಂದ ನಡೆಸಲಾದ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ ವಿತರಿಸಿ ಮಾತನಾಡಿದರು.
ಪುಸ್ತಕಗಳನ್ನು ಓದುವುದರಿಂದ ಜೀವನದ ಆಯಾಮಗಳು ಬದಲಾಗುತ್ತದೆ. ಪ್ರತಿಯೊಬ್ಬರಿಗೂ ಅಗತ್ಯವಿರುವ ಕೌಶಲ್ಯ, ವ್ಯಕ್ತಿತ್ವ ನಿರ್ಮಾಣ ಸಂಘಟನೆ ಹಾಗೂ ನಾಯಕತ್ವ ಗುಣಗಳು ಪುಸ್ತಕ ಓದುವುದರಿಂದ ದೊರೆಯುತ್ತದೆ. ಜೀವನದಲ್ಲಿ ಯಶಸ್ಸು ಪಡೆಯಬೇಕಾದರೆ ಸಮಯ ಪಾಲನೆ ಅತೀ ಮುಖ್ಯ. ಉನ್ನತ ಸಾಧನೆ ಮಾಡಿದವರ ಜೀವನ ಶೈಲಿ ಅಭ್ಯಯಿಸಿದಾಗ ಅವರೆಲ್ಲರೂ ಬೆಳಗ್ಗೆ ಬೇಗ ಎದ್ದು ಕೆಲಸ ಮಾಡುವ ಗುಣ ಹೊಂದಿದವರಾಗಿದ್ದಾರೆ. ಹೀಗಾಗಿ ವಿದ್ಯಾರ್ಥಿಗಳು ಸಹ ಬೆಳಗ್ಗೆ ಬೇಗ ಯೋಗ-ಧ್ಯಾನ ಮಾಡುವುದನ್ನು ರೂಢಿಸಿಕೊಳ್ಳಬೇಕು. ನಿತ್ಯದ ಕೆಲಸಗಳಲ್ಲಿಯೂ ಸಮಯ ಪಾಲನೆಗೆ ಆದ್ಯತೆ ನೀಡಬೇಕು ಎಂದು ಕರೆ ನೀಡಿದರು. ಕ್ರೀಡೆ, ಪ್ರವಾಸಗಳು ಮನುಷ್ಯನ ಭಾಗವಾಗಿರಬೇಕು. ಮಾದಕ ವ್ಯಸನಗಳಿಂದ ದೂರವಿರಬೇಕು. ಸಾಮಾಜಿಕ ಜಾಲತಾಣಗಳ ಬಳಕೆಯೂ ನಿಯಂತ್ರಣದಲ್ಲಿರಬೇಕು. ಮನುಷ್ಯನ ವರ್ತನೆ, ತನ್ನ ಮೇಲೆ ತನಗೆ ಇರುವ ನಂಬಿಕೆ, ಆತ್ಮ ವಿಶ್ವಾಸ ಹಾಗೂ ದೃಢ ಸಂಕಲ್ಪದಿAದ ಮಾಡಲ್ಪಡುವ ಕೆಲಸಗಳು ಗುರಿ ಮುಟ್ಟುತ್ತವೆ. ಯಶಸ್ಸಿಗೆ ವಯಸ್ಸಿನ ಮಿತಿ ಇಲ್ಲ ಎಂದು ಅವರು ಹೇಳಿದರು.
ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಅವರು ಮಾತನಾಡಿ, ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಬೇಕು ಎಂಬ ನಿಟ್ಟಿನಲ್ಲಿ ಪಾಲಕರು ವಿದ್ಯಾರ್ಥಿಗಳನ್ನು ದೂರದ ಊರಿಗೆ ಕಳುಹಿಸುತ್ತಿದ್ದರು. ಹೀಗಾಗಿ ಸ್ಥಳೀಯವಾಗಿ ಉತ್ತಮ ಶಿಕ್ಷಣ ನೀಡಲು ವಿಶ್ವದರ್ಶನ ಸಂಸ್ಥೆ ಹಲವು ಯೋಜನೆಗಳನ್ನು ರೂಪಿಸಿದೆ. ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವುದಕ್ಕಾಗಿಯೂ ಮಕ್ಕಳಿಗೆ ಇಲ್ಲಿ ತರಭೇತಿ ನೀಡಲಾಗುತ್ತಿದೆ ಎಂದರು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಸೆಂಟ್ರಲ್ ಸ್ಕೂಲ್ ನ ಪ್ರಾಚಾರ್ಯರಾದ ಗಣೇಶ ಭಟ್ಟ, ಉಪ ಪ್ರಾಚಾರ್ಯರಾದ ಆಸ್ಮಾ ಶೇಖ್, ಕರಿಯರ್ ಅಕಾಡೆಮಿ ಸಂಯೋಜಕರಾದ ಪ್ರಸನ್ನ ಭಟ್ಟ ಇತರರು ಹಾಜರಿದ್ದರು. ಪ್ರಣತಿ ಮೆಣಸುಮನೆ ಪ್ರಾರ್ಥಿಸಿದರು. ಡಾ. ಡಿ.ಕೆ ಗಾಂವ್ಕರ್ ಸ್ವಾಗತಿಸಿದರು. ಡಾ. ಕವಿತಾ ಹೆಬ್ಬಾರ್ ನಿರ್ವಹಿಸಿದರು.
- 07 Mar
- 2022