
ಯಲ್ಲಾಪುರ: ಮಕ್ಕಳ ಸಮಗ್ರ ಅಭಿವೃದ್ಧಿಗೆ ರಾಷ್ಟ್ರೀಯ ಶಿಕ್ಷಣ ನೀತಿ ಹಾಗೂ ಸಿ.ಬಿ.ಎಸ್.ಇ ಶಿಕ್ಷಣ ಪದ್ದತಿ ಪೂರಕವಾಗಿದೆ ಎಂದು ಶಿಕ್ಷಣ ತಜ್ಣರು ಅಭಿಪ್ರಾಯ ಪಟ್ಟಿದ್ದಾರೆ.
ಪಟ್ಟಣದ ಅಡಿಕೆ ಭವನದಲ್ಲಿ ಶನಿವಾರ ಅಡಿಕೆ ವರ್ತಕರ ಸಂಘ, ಭಾರತ ಸೇವಾದಳ ಹಾಗೂ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ನಡೆದ “ಸಿ.ಬಿ.ಎಸ್.ಇ ಹಾಗೂ ಎನ್.ಇ.ಪಿ ಅರಿವು ಕಾರ್ಯಕ್ರಮ”ದಲ್ಲಿ ಭಾಗವಹಿಸಿದ ತಜ್ಞರು ತಮ್ಮ ಅಭಿಪ್ರಾಯ ಮಂಡಿಸಿ, ಸಾರ್ವಜನಿಕರ ಪ್ರಶ್ನೆಗಳಿಗೆ ಉತ್ತರಿಸಿದರು.
ರಾಷ್ಟ್ರೀಯ ಶಿಕ್ಷಣ ನೀತಿಯೂ ಭಾರತೀಯ ಸಂಸ್ಕೃತಿಯನ್ನು ಜೋಡಿಸುವದರೊಂದಿಗೆ ಶೈಕ್ಷಣಿಕ ವ್ಯವಸ್ಥೆಯಲ್ಲಿ ಕೌಶಲ್ಯ ವೃದ್ಧಿಸುವ ಪದ್ದತಿಯನ್ನು ಒಳಗೊಂಡಿದೆ. ಈ ಶಿಕ್ಷಣ ನೀತಿಯಲ್ಲಿ ಪ್ರಾಥಮಿಕ, ಪ್ರೌಢ ಹಾಗೂ ಪಿಯು ವಿದ್ಯಾರ್ಥಿಗಳ ಮಾನಸಿಕ ಮತ್ತು ದೈಹಿಕ ಆರೋಗ್ಯಕ್ಕೆ ಒತ್ತು ನೀಡಲಾಗುತ್ತದೆ. ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿ ವಯಸ್ಸಿನ ಮಿತಿ ಇಲ್ಲದೇ ನಿರಂತರ ಕಲಿಕೆಗೆ ಅವಕಾಶ ನೀಡಲಾಗಿದೆ. ಮನೆಯಲ್ಲಿ ಕೆಲಸ ಮಾಡುವ ಮಹಿಳೆ ಸಹ ತಮ್ಮ ಇಷ್ಟದ ಶಿಕ್ಷಣವನ್ನು ಪಡೆಯಬಹುದು ಎಂದು ದಾಂಡೇಲಿ ಬಂಗೂರು ನಗರ ಡಿಗ್ರಿ ಕಾಲೇಜಿನ ಪ್ರಾಧ್ಯಾಪಕ ಡಾ. ಆರ್.ಜಿ ಹೆಗಡೆ ವಿವರಿಸಿದರು. ಭಾರತೀಯರಿಗೆ ಅನಾಧಿಕಾಲದಿಂದಲೂ ಶಿಕ್ಷಣ ವ್ಯವಸ್ಥೆಯ ಮಹತ್ವ ತಿಳಿದಿತ್ತು. ಗುರುಕುಲ ಪದ್ದತಿಯಲ್ಲಿ ಪ್ರಕೃತಿಯೊಂದಿಗೆ ಬರೆತು ಜೀವನ ಶಿಕ್ಷಣವನ್ನು ಕಲಿಸಲಾಗುತ್ತಿತ್ತು. ಪ್ರಶ್ನೆ-ಉತ್ತರ ಆಧಾರಿತ ಶಿಕ್ಷಣದಿಂದ ವ್ಯಕ್ತಿಯ ದೃಷ್ಟಿಕೋನ ಮತ್ತು ವ್ಯಕ್ತಿತ್ವ ಬೆಳವಣಿಗೆ ಆಗುತ್ತಿತ್ತು. ಗುರುವಿನ ಅಪೂರ್ವವಾದ ಜ್ಞಾನ, ವಯಕ್ತಿಕ ವ್ಯಕ್ತಿತ್ವ ಶಿಷ್ಯರ ಮೇಲೆ ಪ್ರಭಾವ ಬೀರುತ್ತಿತ್ತು. ಪರಕೀಯರ ಆಡಳಿತದಲ್ಲಿ ಜಾರಿಗೆ ಬಂದ ತಾರ್ತಿಕ ಆಧಾರಿತ ಕಲಿಕೆ ಭಾರತೀಯರ ಮಾನಸಿಕತೆ ಹಾಗೂ ಚಿಂತನೆಯ ವಿಧಾನವನ್ನು ಬದಲಿಸಿತು. ಭಾರತೀಯರನ್ನು ಶರಣಾಗತಿಯನ್ನಾಗಿಸುವ ಶಿಕ್ಷಣವನ್ನು ಬ್ರಿಟೀಷರು ಜಾರಿಗೆ ತಂದಿದ್ದರು. 1986ರಲ್ಲಿ ಜಾರಿಗೆ ಬಂದ ಶಿಕ್ಷಣ ಕಾಯಿದೆಯೂ ಸಂಸ್ಕೃತಿ ಅಭಿವೃದ್ಧಿಗೆ ಮಹತ್ವ ಕೊಟ್ಟಿರಲಿಲ್ಲ. ಹೀಗಾಗಿ ಸಂಸ್ಕೃತಿ ಜನ ಜೀವನ ಕುಸಿಯಲಾರಂಭಿಸಿತು. ಸಂಸ್ಕಾರ ನೀಡುವ ಹಾಗೂ ಕೌಶಲ್ಯ ವೃದ್ದಿಸುವ ಮುಖ್ಯ ಉದ್ದೇಶದೊಂದಿಗೆ ರಾಷ್ಟ್ರೀಯ ಶಿಕ್ಷಣ ನೀತಿ-2020 ಜಾರಿಗೆ ಬಂದಿದೆ ಎಂದಿ ಅವರು ಮಾಹಿತಿ ನೀಡಿದರು.

ಉತ್ತರ ಕನ್ನಡ ಜಿಲ್ಲೆ ಶೈಕ್ಷಣಿಕ ಚಟುವಟಿಕೆಗಳಿಗೆ ಪೂರಕವಾದ ವಾತಾವರಣವನ್ನು ಹೊಂದಿದೆ. ರಾಜ್ಯ ಪಠ್ಯಕ್ರಮವನ್ನು ಅಧ್ಯಯನ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಸಿ.ಬಿ.ಎಸ್.ಇ ಪಠ್ಯಕ್ರಮ ಕಷ್ಟವಾಗುವುದಿಲ್ಲ. ಮಕ್ಕಳೊಂದಿಗೆ ಶಿಕ್ಷಕರ ಜ್ಞಾನವೂ ಇಲ್ಲಿ ಉನ್ನತಿಕರಣವಾಗುತ್ತದೆ ಎಂದು ಬೆಳಗಾವಿಯ ಕೆ.ಎಲ್.ಇ ಸ್ಕೂಲ್ ನ ಪ್ರಾಧ್ಯಾಪಕರಾದ ಪ್ರೋ. ಪ್ರವೀಣ ಚಂದಿಲ್ಕರ್ ಅಭಿಪ್ರಾಯ ಪಟ್ಟರು. ಮಕ್ಕಳಿಗೆ ಜೀವನ ಶಿಕ್ಷಣ ಕೊಡಬೇಕು. ಅವರವರ ಆಸಕ್ತಿಗೆ ಅನುಗುಣವಾಗಿ ಕಲಿಕೆಗೆ ಅವಕಾಶ ದೊರೆಯಬೇಕು. ಆ ನಿಟ್ಟಿನಲ್ಲಿ ಮಕ್ಕಳ ಸರ್ವತೋಮುಖ ಅಭಿವೃದ್ದಿಗೆ ಸಿ.ಬಿ.ಎಸ್.ಇ ಶಿಕ್ಷಣ ಅನುಕೂಲಕರವಾಗಿದೆ ಎಂದು ಅವರು ವಿವರಿಸಿದರು. ಸಿ.ಬಿ.ಎಸ್.ಇ ಶಿಕ್ಷಣದಿಂದ ಮಕ್ಕಳಲ್ಲಿ ಸ್ಪರ್ಧಾತ್ಮಕ ಮನೋಭಾವನೆ ಬೆಳೆಯಲಿದೆ. ಮೌಲ್ಯಾಧಾರಿತ ಶಿಕ್ಷಣ ಪಡೆದ ಮಗು ಉತ್ತಮ ಪ್ರಜೆಯಾಗುವುದರಲ್ಲಿ ಸಂದೇಹವಿಲ್ಲ ಎಂದು ಅವರು ಹೇಳಿದರು. ಅಡಿಕೆ ವರ್ತಕರ ಸಂಘದ ಅಧ್ಯಕ್ಷರಾದ ರವಿ ವಿ ಹೆಗಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ, ಪ್ರಮುಖರಾದ ಎಂ.ಆರ್ ಹೆಗಡೆ ಕುಂಬ್ರಿಗುಡ್ಡೆ ಮಾತನಾಡಿದರು. ಕಿರಾಣಿ ವರ್ತಕರ ಸಂಘದ ಅಧ್ಯಕ್ಷರಾದ ಗಿರೀಶ ಭಾಗ್ವತ್, ಲಯನ್ಸ್ ಕ್ಲಬ್ ಅಧ್ಯಕ್ಷರಾದ ಶ್ರೀಧರ ಶೆಟ್ಟಿ, ಮಾರಥ ಮಂಡಳಿಯ ಅಧ್ಯಕ್ಷರಾದ ರಮಾ ದೀಕ್ಷಿತ್ ವೇದಿಕೆಯಲ್ಲಿದ್ದರು. ಡಾ. ಡಿ.ಕೆ ಗಾಂವ್ಕರ್ ನಿರ್ವಹಿಸಿದರು.
