ಯಲ್ಲಾಪುರ: ಅತೀ ಕಡಿಮೆ ದರದಲ್ಲಿ ಅತ್ಯುತ್ತಮ ಶಿಕ್ಷಣ ನೀಡಲು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಬದ್ಧವಾಗಿದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ಅವರು ಹೇಳಿದರು.
ಭಾನುವಾರ ಸಂಸ್ಥೆ ಆವಾರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಳೆದ ಒಂದುವರೆ ವರ್ಷದಿಂದ ಶೈಕ್ಷಣಿಕ ವಲಯದಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಈ ವರ್ಷದಿಂದ ವಿಶ್ವದರ್ಶನ ಪಿ.ಯು ಕಾಲೇಜು ಪ್ರಾರಂಭವಾಗಲಿದೆ. ವಿಜ್ಞಾನ ಹಾಗೂ ವಾಣಿಜ್ಯ ವಿಷಯಗಳನ್ನು ಇಲ್ಲಿ ಬೋಧನೆ ಮಾಡಲಾಗುತ್ತದೆ. ಆಧುನಿಕ ಪ್ರಯೋಗಾಲಯ ನಿರ್ಮಿಸಲಾಗಿದ್ದು, ನುರಿತ ತಜ್ಞರ ನೇಮಕಾತಿ ನಡೆದಿದೆ. ವಾಣಿಜ್ಯ ವಿದ್ಯಾರ್ಥಿಗಳಿಗೆ ಸಿ.ಎ ಪೌಂಡೇಶನ್, ಐ.ಬಿ.ಪಿ.ಎಸ್ ಹಾಗೂ ವಿಜ್ಞಾನ ವಿದ್ಯಾರ್ಥಿಗಳಿಗೆ ಜೆ.ಇ.ಇ, ನೀಟ್, ಸಿಇಟಿ ಪರೀಕ್ಷೆಗಳ ತರಬೇತಿ ನೀಡುವುದು ವಿಶ್ವದರ್ಶನದ ವಿಶೇಷವಾಗಿದೆ ಎಂದರು. ಈ ವರ್ಷ 300 ವಿದ್ಯಾರ್ಥಿಗಳಿಗೆ ವಸತಿ ಕಲ್ಪಿಸಲಾಗುತ್ತದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಸ್ವಂತ ಕಟ್ಟಡದಲ್ಲಿ ಹಾಸ್ಟೆಲ್ ನಿರ್ಮಿಸಲಾಗುತ್ತದೆ ಎಂದರು.
ಇದರೊಂದಿಗೆ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯೂ ವಿಶ್ವದರ್ಶನ ಕೇಂದ್ರೀಯ ಶಾಲೆಯಾಗಿ ಪರಿವರ್ತನೆಯಾಗಿದ್ದು, ಮೇ 15ರಿಂದ ಸಿ.ಬಿ.ಎಸ್.ಇ ಪದ್ದತಿ ಶಿಕ್ಷಣ ನೀಡಲಾಗುತ್ತದೆ. ಸಿ.ಬಿ.ಎಸ್.ಇಗೆ ನಿರೀಕ್ಷೆಗೂ ಮೀರಿ ದಾಖಲಾತಿ ನಡೆದಿದೆ ಎಂದರು. ತರಬೇತಿ ಪಡೆದ ಶಿಕ್ಷಕರಿಂದ ಮಕ್ಕಳಿಗೆ ಪಾಠ ಬೋಧನೆ ನಡೆಯುತ್ತದೆ. ಸಂಪನ್ಮೂಲ ವ್ಯಕ್ತಿಗಳು ಸಹ ಆಗಮಿಸಿ ಬೋಧನೆ ಮಾಡಲಿದ್ದಾರೆ. ವಿಶ್ವದರ್ಶನ ಪಿಯು ಕಾಲೇಜು ಹಾಗೂ ವಿಶ್ವದರ್ಶನ ಕೇಂದ್ರಿಯ ಶಾಲೆಗೆ ಬೆಂಗಳೂರಿನ ಬೇಸ್ ಅಕಾಡೆಮಿಯ ಸ್ಥಾಪಕರಾದ ನಾಗರಾಜ ಅವರು ಶೈಕ್ಷಣಿಕ ಮಾರ್ಗದರ್ಶಕರಾಗಿದ್ದಾರೆ. ಜೊತೆಗೆ, ಅಕ್ಷರ ಇಂಟರ್ ನ್ಯಾಶನಲ್, ವಿದ್ಯಾನಿಕೇತನ ಗಂಗಾವತಿ, ಎಸ್.ಜೆ.ಆರ್.ಸಿ ಬೆಂಗಳೂರು ಮೊದಲಾದ ಶಿಕ್ಷಣ ಸಂಸ್ಥೆಗಳು ಸಹಯೋಗ ನೀಡಿವೆ ಎಂದರು.
ವಿಶ್ವದರ್ಶನ ಸಂಸ್ಥೆ ಆವಾರದಲ್ಲಿ ನೂತನವಾಗಿ ಸಭಾ ಭವನ ನಿರ್ಮಿಸಲಾಗಿದ್ದು, ಇದಕ್ಕೆ ಶ್ರೀಮದ್ ಗಂಗಾಧರೇOದ್ರ ಸರಸ್ವತಿ ಸ್ವಾಮೀಜಿ ಅವರ ಹೆಸರಿಡಲಾಗಿದೆ. ಇಡಗುಂದಿಯಲ್ಲಿರುವ ಕನ್ನಡ ಮಾಧ್ಯಮ ಶಾಲೆಯ ಕಟ್ಟಡ ನವೀಕರಿಸಲಾಗಿದೆ. ಅತ್ಯಾಧುನಿಕ ಪ್ರಯೋಗಾಲಯ, ಸುಸಜ್ಜಿತವಾದ ತರಗತಿಗಳು ಹಾಗೂ ಅಗತ್ಯ ಮೂಲಭೂತ ಸೌಕರ್ಯಗಳ ನಿರ್ಮಾಣಕ್ಕೆ ಒತ್ತು ನೀಡಲಾಗಿದೆ. ಪೂರ್ವ ಪ್ರಾಥಮಿಕ ಶಾಲೆಯಲ್ಲಿ ಸಹ ಅಂತರಾಷ್ಟಿçÃಯ ಮಟ್ಟದ ಶಿಕ್ಷಣ ನೀಡಲಾಗುತ್ತದೆ. ಇದಕ್ಕಾಗಿ ಪ್ರಿಡೋ ಎಂಬ ಸಂಸ್ಥೆ ಸಹಯೋಗ ನೀಡಲಿದೆ ಎಂದರು. ಪ್ರತಿಯೊಬ್ಬ ವಿದ್ಯಾರ್ಥಿಗೂ ನಾಲ್ಕು ಭಾಷೆಯಲ್ಲಿ ಹಿಡಿತ ಸಾಧಿಸುವ ಕೌಶಲ್ಯ ಕಲಿಸಲಾಗುತ್ತದೆ. ಒಂದು ಗಂಟೆ ಮುಂಚಿತವಾಗಿ ತರಗತಿಯನ್ನು ಪ್ರಾರಂಭಿಸಿ, ಶಾಲೆಯಲ್ಲಿಯೇ ಹೋಂ ವರ್ಕ ಮಾಡಿಸಲಾಗುತ್ತದೆ ಎಂದರು.
* ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮ
ಏಪ್ರಿಲ್ 29ರಂದು ವಿಶ್ವದರ್ಶನ ಸಂಭ್ರಮ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದ್ದು, ಅಂದು ಇಡಗುಂದಿಯ ಕಟ್ಟಡ ಉದ್ಘಾಟನೆ, ಪಿಯು ಮತ್ತು ಕೇಂದ್ರಿಯ ಶಾಲೆಯ ತರಗತಿಗಳ ಉದ್ಘಾಟನೆ ನಂತರ ಸಭಾ ಕಾರ್ಯಕ್ರಮ ನಡೆಯಲಿದೆ. ಶಿಕ್ಷಣ ಸಚಿವ ಬಿ.ಸಿ ನಾಗೇಶ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ. ಉಸ್ತುವಾರಿ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಕಾರ್ಮಿಕ ಸಚಿವರಾದ ಶಿವರಾಮ ಹೆಬ್ಬಾರ್, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷರಾದ ವಿ.ಎಸ್ ಪಾಟೀಲ್, ವಿಧಾನ ಪರಿಷತ್ ಸದಸ್ಯರಾದ ಎನ್. ರವಿಕುಮಾರ, ಶಾಂತರಾಮ ಸಿದ್ದಿ, ಪಂಚಾಯತ ರಾಜ್ ವಿಕೇಂದ್ರಿಕರಣ ಉಪಸಮಿತಿಯ ಉಪಾಧ್ಯಕ್ಷರಾದ ಪ್ರಮೋದ ಹೆಗಡೆ ಮೊದಲಾದವರು ಭಾಗವಹಿಸಲಿದ್ದಾರೆ. ಬಡತನದ ನಡುವೆಯೂ ಸಾಧನೆ ಮಾಡಿದ ಮೈಸೂರು ಮರ್ಕಂಟೈಲ್ ಕಂಪನಿ ಲಿ ನ ಅಧ್ಯಕ್ಷರಾದ ಎಚ್.ಎಸ್ ಶೆಟ್ಟಿ ಅವರಿಗೆ ವಿಶ್ವದರ್ಶನ ಪುರಸ್ಕಾರ ನೀಡಲಾಗುತ್ತದೆ. “ಶಿಕ್ಷಣ, ಸಂಸ್ಕಾರ, ರಾಷ್ಟç ನಿರ್ಮಾಣ ವಿಷಯದ ಕುರಿತು ಶಿಕ್ಷಣ ಸಚಿವರಾದ ಬಿ.ಸಿ ನಾಗೇಶ್ ಅವರು ಪ್ರಧಾನ ಭಾಷಣ ಮಾಡಲಿದ್ದಾರೆ. ಇದಾದ ನಂತರ ಯಕ್ಷಗಾನ ಮತ್ತು ಸಾಂಸ್ಕೃತೀಕ ಕಾರ್ಯಕ್ರಮಗಳು ನಡೆಯಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಸಂಸ್ಥೆಯ ಉಪಾಧ್ಯಕ್ಷರಾದ ಶ್ರೀನಿವಾಸ ಹೆಬ್ಬಾರ್, ಆಡಳಿತ ಮಂಡಳಿ ಸದಸ್ಯರಾದ ಡಾ. ಧನಂಜಯ, ದೀಪಾ, ಡಾ. ಕೋಡಿರಂಗಪ್ಪ, ಧರ್ಮೇಶ್ವರ್, ಡಾ. ಕೆ.ಬಿ ವೇದಮೂರ್ತಿ, ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ, ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಇದ್ದರು.
*ಬಡ ಪ್ರತಿಭಾನ್ವಿತರಿಗೆ ಉಚಿತ ಶಿಕ್ಷಣ
ಬಡ ಪ್ರತಿಭಾನ್ವಿತರಿಗೆ ಉಚಿತ ಶಿಕ್ಷಣ ನೀಡಲು ವಿಶ್ವದರ್ಶನ ಶಿಕ್ಷಣ ಸಂಸ್ಥೆ ಟ್ಯಾಲೆಂಟ್ ಹಂಟ್ ಎಂಬ ಪರೀಕ್ಷೆಯನ್ನು ಹಮ್ಮಿಕೊಂಡಿದೆ. ಈ ಪರೀಕ್ಷೆಯಲ್ಲಿ ಸಾಧನೆ ಮಾಡಿದ ತಲಾ 10 ವಿದ್ಯಾರ್ಥಿಗಳಿಗೆ ವಿಶ್ವದರ್ಶನ ಕೇಂದ್ರಿಯ ಶಾಲೆ ಹಾಗೂ ವಿಶ್ವದರ್ಶನ ಪಿ.ಯು ಕಾಲೇಜಿನಲ್ಲಿ ಉಚಿತ ಶಿಕ್ಷಣ ನೀಡಲಾಗುತ್ತದೆ ಎಂದು ಸಂಸ್ಥೆಯ ಅಧ್ಯಕ್ಷರಾದ ಹರಿಪ್ರಕಾಶ ಕೋಣೆಮನೆ ಅವರು ತಿಳಿಸಿದ್ದಾರೆ.