
ಯಲ್ಲಾಪುರ: ಎಸ್.ಎಸ್.ಎಲ್.ಸಿ ನಂತರ ವಿದ್ಯಾರ್ಥಿಗಳು ಕ್ರಿಯಾಶೀಲತೆ, ಧನಾತ್ಮಕ ವಿಚಾರ ಹಾಗೂ ಆತ್ಮ ವಿಶ್ವಾಸ ಹೆಚ್ಚಳವಾಗುವ ವಿಷಯ ಆಯ್ಕೆ ಮಾಡಿಕೊಳ್ಳುವುದು ಅತೀ ಮುಖ್ಯ ಎಂದು ವೈ.ಟಿ.ಎಸ್.ಎಸ್ ನ ನಿವೃತ್ತ ಪ್ರಾಚಾರ್ಯ ಶ್ರೀರಂಗ ಕಟ್ಟಿ ಅವರು ಹೇಳಿದರು.
ವಿಶ್ವದರ್ಶನ ಪಿ.ಯು ಕಾಲೇಜು ಹಾಗೂ ವಿಶ್ವದರ್ಶನ ಕರಿಯರ್ ಅಕಾಡೆಮಿ ಸಹಯೋಗದಲ್ಲಿ ಸಂಸ್ಥೆಯ ಆವಾರದಲ್ಲಿ ನಡೆದ “ಎಸ್.ಎಸ್.ಎಲ್.ಸಿ ನಂತರ ಮುಂದೇನು” ಎಂಬ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಪರೀಕ್ಷೆಗಳಲ್ಲಿ ಹೆಚ್ಚಿನ ಅಂಕ ಪಡೆಯುವುದು ಸಾಧನೆ ಅಲ್ಲ. ಅಂಕ ಗಳಿಕೆಯ ಜೊತೆ ವ್ಯವಹಾರಿಕ ಜ್ಞಾನವೂ ಅಗತ್ಯ. ಉತ್ತಮವಾದ ಜ್ಞಾನದೊಂದಿಗೆ ಆತ್ಮ ವಿಶ್ವಾಸವನ್ನು ಬೆಳಸಿಕೊಂಡಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಾದರೂ ಬದುಕಬಹುದು. ವಿದ್ಯಾರ್ಥಿಗಳು ಎಲ್ಲಾ ದಿಕ್ಕಿನಿಂದಲೂ ಒಳ್ಳೆಯ ವಿಚಾರಗಳನ್ನು ಪಡೆಯಬೇಕು. ಕಲಿಕೆಯಲ್ಲಿ ಆಸಕ್ತಿ, ವಿಮರ್ಶಾತ್ಮಕ ಮನೋಭಾವನೆ ಬೆಳಸಿಕೊಳ್ಳಬೇಕು. ಆಗ ಸರ್ವತೋಮುಖ ವ್ಯಕ್ತಿತ್ವ ವಿಕಾಸನ ಸಾಧ್ಯ ಎಂದು ಅವರು ವಿವರಿಸಿದರು. ಶಿರಸಿಯ ಇಕ್ರಾ ಪ.ಪೂ ಕಾಲೇಜಿನ ಪ್ರಾಚಾರ್ಯರಾದ ರವೀಂದ್ರ ಹೆಗಡೆ ಮಾತನಾಡಿ, ಶಿಕ್ಷಣ ಇಲ್ಲದ ವ್ಯಕ್ತಿ ಯಶಸ್ಸು ಪಡೆಯಲು ಅಸಾಧ್ಯ. ಉತ್ತಮ ಶಿಕ್ಷಣ ಪಡೆದವರಿಗೆ ಉತ್ತಮ ಭವಿಷ್ಯವಿದೆ ಎಂದರು. ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಅವರು ಮಾತನಾಡಿ, ವಿದ್ಯಾರ್ಥಿಗಳು ಸ್ಪರ್ಧಾ ಮನೋಭಾವನೆ ಬೆಳಸಿಕೊಳ್ಳಬೇಕು. ಗುರು ಹಿರಿಯರ ಮಾರ್ಗದರ್ಶನ ಪಡೆದು ವಿದ್ಯಾರ್ಥಿಗಳು ಬದುಕು ರೂಪಿಸಿಕೊಳ್ಳಬೇಕು ಎಂದರು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಹಾಗೂ ವಿವಿಧ ಅಂಗಸAಸ್ಥೆಗಳ ಮುಖ್ಯಸ್ಥರು ಭಾಗವಹಿಸಿದ್ದರು. ಕವಿತಾ ಹೆಬ್ಬಾರ್ ನಿರ್ವಹಿಸಿದರು. ವಿಶ್ವದರ್ಶನ ಪಿ.ಯು ಕಾಲೇಜಿನ ಪ್ರಾಚಾರ್ಯರಾದ ಡಾ. ಡಿ.ಕೆ ಗಾಂವ್ಕರ್ ಸ್ವಾಗತಿಸಿದರು. ಸಭಾ ಕಾರ್ಯಕ್ರಮದ ನಂತರ ಸಂಪನ್ಮೂಲ ವ್ಯಕ್ತಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ಮಾಡಿ, ಕಾರ್ಯಗಾರ ನಡೆಸಿದರು.