
ಯಲ್ಲಾಪುರ: ಸ್ಪಷ್ಟತೆ, ಸ್ವಾಭಿಮಾನ ಹಾಗೂ ಆತ್ಮ ವಿಶ್ವಾಸ ಮೂಡಿಸುವ ಜೀವನ ಶಿಕ್ಷಣ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ ಎಂದು ವೈ.ಟಿ.ಎಸ್.ಎಸ್.ನ ನಿವೃತ್ತ ಪ್ರಾಚಾರ್ಯ, ಚಿಂತಕ ಬೀರಣ್ಣ ನಾಯಕ ಮೊಗಟಾ ಹೇಳಿದರು.
ಅವರು ಮಂಗಳವಾರ ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ವತಿಯಿಂದ ನಡೆದ ಬೇಸಿಗೆ ಶಿಬಿರದ ಸಮಾರೋಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಶಿಬಿರಗಳು ಮಕ್ಕಳಿಗೆ ಅಪಾರವಾದ ಜೀವನಾನುಭವ, ಜ್ಞಾನ ಸಂಪಾದನೆ ಹಾಗೂ ಸ್ವಾಭಿಮಾನವನ್ನು ಕಲಿಸುತ್ತದೆ. ಭಯೋತ್ಪಾದನೆ, ಭೃಷ್ಟಾಚಾರಕ್ಕಿಂತಲೂ ದೊಡ್ಡ ಅಪಾಯಗಳನ್ನು ಎದುರಿಸುವ ಶಕ್ತಿ ಸ್ವಾಭಿಮಾನದಿಂದ ದೊರೆಯುತ್ತದೆ. ಲಾಕ್ ಡೌನ್ ಅವದಿಯಲ್ಲಿ ವಿದ್ಯಾರ್ಥಿಗಳು ಜೀವನ ಮೌಲ್ಯ ಕಳೆದುಕೊಳ್ಳುವ ಆತಂಕ ಎದುರಿಸುತ್ತಿದ್ದರು. ಮಕ್ಕಳಲ್ಲಿ ಚೈತನ್ಯ ತುಂಬಲು ಶಿಬಿರ ಆಯೋಜಿಸಿರುವುದು ಶ್ಲಾಘನೀಯ ಎಂದರು. ಶಿಕ್ಷಕರು ಮಗುವಿನ ಆಸಕ್ತಿ ಗುರುತಿಸಿ, ಶಿಕ್ಷಣ ಕೊಡಬೇಕು. ನಾಯಕತ್ವ ಗುಣವನ್ನು ಬೆಳಸಿ ಬದುಕುವ ಕಲೆ ಕಲಿಸಿಕೊಡಬೇಕು ಎಂದು ಅವರು ಹೇಳಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಅವರು ಅಧ್ಯಕ್ಷತೆ ವಹಿಸಿದ್ದರು. ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ಪ್ರಾಚಾರ್ಯರಾದ ಗಣೇಶ ಭಟ್ಟ ಇತರರು ಇದ್ದರು. ಸೌಂದರ್ಯ ಭಟ್ಟ ಪ್ರಾರ್ಥಿಸಿದರು. ಕಾವ್ಯ ಹೆಗಡೆ ಸ್ವಾಗತಿಸಿದರು. ಕವಿತಾ ಹೆಬ್ಬಾರ್ ವರದಿ ವಾಚಿಸಿದರು. ವಾಣಿಶ್ರಿ ಭಟ್ಟ ನಿರ್ವಹಿಸಿದರು.