ಇಂಗಿತ ಕವನ ಸಂಕಲನ ಬಿಡುಗಡೆ

ಯಲ್ಲಾಪುರ: ಪ್ರತಿಯೊಬ್ಬರು ತಮ್ಮಲ್ಲಿ ಇರುವ ಜ್ಞಾನವನ್ನು ಇತರರಿಗೆ ಹಂಚುವ ಮೂಲಕ ಅದನ್ನು ವೃದ್ದಿಸಿಕೊಳ್ಳಬೇಕು ಎಂದು ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ನಿರ್ದೇಶಕರಾದ ನರಸಿಂಹ ಕೋಣೆಮನೆ ಹೇಳಿದರು.
    ಅವರು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಕೇಂದ್ರ ಕನ್ನಡ ಸಾಹಿತ್ಯ ವೇದಿಕೆ ವತಿಯಿಂದ ನಡೆದ ಶಿಕ್ಷಕ ಡಾ. ನವೀನ ಕುಮಾರ ಎ.ಜಿ ರಚಿತ “ಇಂಗಿತ ಒಂದು ಮನಸಿನ ಭಾವ” ಎಂಬ ಕವನ ಸಂಕಲನ ಲೋಕಾರ್ಪಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
      ಪ್ರತಿಯೊಬ್ಬರಲ್ಲಿಯೂ ಒಂದೊOದು ರೀತಿಯ ಜ್ಞಾನವಿರುತ್ತದೆ. ಅದನ್ನು ಇತರರಿಗೆ ಹಂಚಿದಾಗ ಮಾತ್ರ ವೃದ್ಧಿಯಾಗುತ್ತದೆ. ಜನರಲ್ಲಿ ಇರುವ ಪ್ರತಿಭೆ ಸಮಾಜಕ್ಕೆ ಪರಿಚಯ ಆಗದಿದ್ದರೆ ಅದು ವ್ಯರ್ಥ ಎಂದು ಅವರು ಹೇಳಿದರು. ಜ್ಞಾನ ಸಂಪಾದನೆ ಎಂಬುದು ಎಂದಿಗೂ ಮುಗಿಯುವುದಿಲ್ಲ. ಗುರು ಹಿರಿಯರ ಮಾರ್ಗದರ್ಶನದಲ್ಲಿ ಜ್ಞಾನ ಸಂಪಾದನೆ ನಿರಂತರವಾಗಿರಬೇಕು ಎಂದರು. ಸಮಾಜಕ್ಕೆ ಹಣ ಕೊಟ್ಟರೆ ಅದು ಶಾಶ್ವತವಲ್ಲ. ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಟ್ಟರೆ ಅದು ಶಾಶ್ವತವಾಗಿರುತ್ತದೆ. ವಿಶ್ವದರ್ಶನ ಶಿಕ್ಷಣದೊಂದಿಗೆ ಸೇವಾ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದೆ. ಆರೋಗ್ಯ ಕ್ಷೇತ್ರದ ಸೇವೆಗೂ ಸಂಸ್ಥೆ ಬದ್ಧವಾಗಿದೆ ಎಂದರು.
    ವೈ.ಟಿ.ಎಸ್.ಎಸ್ ನ ನಿವೃತ್ತ ಪ್ರಾಚಾರ್ಯರಾದ ಬೀರಣ್ಣ ನಾಯಕ ಮೊಗಟಾ ಮಾತನಾಡಿ, “ಇಂಗಿತ” ಕವನ ಸಂಕಲನವೂ ಸಮಾಜದಲ್ಲಿನ ತಾರತಮ್ಯ, ಪ್ರೀತಿ-ಪ್ರೇಮ, ಹನಿಗವನ, ವ್ಯಂಗ್ಯದ ಧ್ವನಿಯನ್ನು ಸಂಕಲನ ಒಳಗೊಂಡಿದೆ. ಇಂತಹ ಪುಸ್ತಕಗಳನ್ನು ಓದಿ ಇತರರಿಗೆ ಹಂಚುವ ಸಂಪ್ರದಾಯ ಇನ್ನಷ್ಟು ಬೆಳೆಯಬೇಕು ಎಂದು ಅಭಿಪ್ರಾಯ ಪಟ್ಟರು. ಸಾಹಿತಿ ಹಾಗೂ ಉಪನ್ಯಾಸಕರಾದ ಸರ್ಫರಾಜ ಚಂದ್ರಗುತ್ತಿ ಅವರನ್ನು ಸನ್ಮಾನಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಒಳ್ಳೆಯ ಕವಿ ಆಗಬೇಕಾದವರು ಒಳ್ಳೆಯ ಓದುಗರಾಗಬೇಕು. ಸಮಾಜವನ್ನು ಆಸಕ್ತಿ, ಪ್ರೀತಿ ಹಾಗೂ ಸಹಾನುಭೂತಿಯಿಂದ ನೋಡುವ ಎಲ್ಲರಲ್ಲೂ ಕವಿ ಇದ್ದಾನೆ. ಮಕ್ಕಳು ಬರವಣಿಗೆ ರೂಡಿಸಿಕೊಳ್ಳಬೇಕು ಎಂದರು. ಸಾಹಿತಿ ವನರಾಗ ಶರ್ಮ ಕವನ ಸಂಕಲನ ಬಿಡುಗಡೆ ಮಾಡಿದರು. ಸಾಹಿತಿ ಶಿವಲೀಲಾ ಹುಣಸಗಿ, ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ ವೇದಿಕೆಯಲ್ಲಿದ್ದರು. ಡಾ. ಡಿ.ಕೆ ಗಾಂವ್ಕರ್ ಕೃತಿ ಪರಿಚಯ ಮಾಡಿದರು. ಮೋಹಿತ ಭಟ್ಟ ಪ್ರಾರ್ಥಿಸಿದರು. ಡಾ. ನವೀನ್ ಕುಮಾರ ಎ.ಜೆ ಸ್ವಾಗತಿಸಿದರು. ಕೇಬಲ್ ನಾಗೇಶ ನಿರ್ವಹಿಸಿದರು.

Leave a Reply

Your email address will not be published. Required fields are marked *