ಯಲ್ಲಾಪುರ: ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ವಿದ್ಯಾರ್ಥಿಗಳಿಗೆ ಮೌಲ್ಯಾಧಾರಿತ ಶಿಕ್ಷಣ ಒದಗಿಸುವ ಅಗತ್ಯವಿದೆ ಎಂದು ಬೆಳಗಾವಿಯ ಕೆ.ಎಲ್.ಇ ಶಿಕ್ಷಣ ಸಂಸ್ಥೆಯ ಪ್ರಾದ್ಯಾಪಕರಾದ ಪ್ರೋ. ಪ್ರವೀಣ ಚಿಂದಲಕರ್ ಹೇಳಿದರು.
ಅವರು ಶುಕ್ರವಾರ ನಾಯ್ಕನರೆಯ ಶಾರದಾಂಬಾ ದೇವಿಯ ಸನ್ನಿಧಿಯಲ್ಲಿ ವಿಶ್ವದರ್ಶನ ಶಿಕ್ಷಣ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಸಿಬಿಎಸ್‌ಇ ಪಠ್ಯಕ್ರಮದ ಪರಿಚಯಾತ್ಮಕ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಒದಗಿಸಲು ಸಿಬಿಎಸ್‌ಇ ಪಠ್ಯಕ್ರಮ ಆಧಾರಿತ ಶಿಕ್ಷಣ ಸಹಾಯಕವಾಗಿದೆ. ಸಿಬಿಎಸ್‌ಇ ಪದ್ದತಿಯಲ್ಲಿ ಪ್ರಾಯೋಗಿಕ ಶಿಕ್ಷಣಕ್ಕೆ ಹೆಚ್ಚು ಒತ್ತು ಕೊಡಲಾಗುತ್ತದೆ. ರಾಜ್ಯ ಪಠ್ಯಕ್ರಮ ಅದ್ಯಯನ ನಡೆಸುತ್ತಿರುವ ಮಕ್ಕಳಿಗೆ ಸಿಬಿಎಸ್‌ಇ ಶಿಕ್ಷಣ ಪದ್ದತಿ ಕಷ್ಟವಲ್ಲ. ಮಕ್ಕಳ ಕೌಶಲ್ಯ ಅಭಿವೃದ್ಧಿಗೆ ಇದು ಸಹಾಯಕವಾಗಿದೆ ಎಂದು ವಿವರಿಸಿದರು. ಮೌಲ್ಯಾಧಾರಿತ ಶಿಕ್ಷಣ, ಶಿಸ್ತು, ಸಮಯ ಪ್ರಜ್ಞೆಯನ್ನು ಈ ಶಿಕ್ಷಣ ಪದ್ದತಿಯಲ್ಲಿ ಬೆಳಸಲಾಗುತ್ತದೆ. ಒತ್ತಡ ರಹಿತ ಶಿಕ್ಷಣ, ಮಕ್ಕಳಲ್ಲಿನ ಪ್ರತಿಭೆಗಳಿಗೆ ಸೂಕ್ತ ಪ್ರೋತ್ಸಾಹ, ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಆತ್ಮವಿಶ್ವಾಸವನ್ನು ಕಲಿಸಲಾಗುತ್ತದೆ. ತಂತ್ರಜ್ಞಾನ ಆಧಾರಿತ ನಾವಿನ್ಯತೆಯನ್ನು ಹೊಂದಿದ ಶಿಕ್ಷಣವನ್ನು ನೀಡಲಾಗುತ್ತದೆ. ಇಂದಿನ ಮಕ್ಕಳಲ್ಲಿ ಅಪಾರ ಬುದ್ದಿವಂತಿಕೆ, ಕಲಿಯುವ ಸಾಮರ್ಥ್ಯ ಹಾಗೂ ಆಸಕ್ತಿಯಿದೆ. ಅದಕ್ಕೆ ಸಿಬಿಎಸ್‌ಇ ಶಿಕ್ಷಣ ಪೂರಕ ವಾತಾವರಣ ಕಲ್ಪಿಸುತ್ತದೆ ಎಂದು ತಿಳಿಸಿದರು.
ಉತ್ತಮ ಸಂಸ್ಥೆಯಲ್ಲಿ ಮಕ್ಕಳಿಗೆ ಶಿಕ್ಷಣ ಕೊಡಿಸುವುದರಿಂದ ಮಕ್ಕಳ ಜೊತೆ ಪಾಲಕರ ಜ್ಞಾನಾಭಿವೃದ್ದಿಯೂ ಹೆಚ್ಚುತ್ತದೆ. ಪಠ್ಯದ ಜೊತೆ ಪಠ್ಯೇತರ ಚಟುವಟಿಕೆಗಳಿಗೆ ಸಹ ಶಾಲೆಯಲ್ಲಿ ಒತ್ತು ನೀಡುವುದರಿಂದ ಮಕ್ಕಳ ದೈಹಿಕ ಹಾಗೂ ಬೌದ್ಧಿಕ ವಿಕಸನ ಹೆಚ್ಚಳವಾಗಲಿದೆ ಎಂದು ವಿವರಿಸಿದರು. ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಬಸ್ ಸಂಚಾರ ಪ್ರಾರಂಭಿಸಲು ಶ್ರಮಿಸಿದ ಜಿ.ಎನ್ ಭಟ್ಟ ಹಾಗೂ ಸುಧಾಕರ ಭಟ್ಟ ಗೌರವ ಸ್ವೀಕರಿಸಿ ಅಭಿಪ್ರಾಯ ಹಂಚಿಕೊAಡರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ವಿಶ್ವದರ್ಶನ ಸೆಂಟ್ರಲ್ ಸ್ಕೂಲ್ ಪ್ರಾಚಾರ್ಯರಾದ ಗಣೇಶ ಭಟ್ಟ, ಉಪ ಪ್ರಾಚಾರ್ಯರಾದ ಆಸ್ಮಾ ಶೇಖ್ ಮೊದಲಾದವರು ಇದ್ದರು. ಡಾ. ಡಿ.ಕೆ ಗಾಂವ್ಕರ್ ನಿರ್ವಹಿಸಿದರು.