
ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ವಿ.ಎಸ್ ಪಾಟೀಲ ಅವರು ಚಾಲನೆ ನೀಡಿದರು.
ಯಲ್ಲಾಪುರ: ಮಕ್ಕಳಿಗೆ ಬುದ್ದಿವಂತಿಕೆ ಜೊತೆ ಕೌಶಲ್ಯವೂ ಅಗತ್ಯ ಎಂದು ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಅಧ್ಯಕ್ಷರಾದ ವಿ.ಎಸ್ ಪಾಟೀಲ ಹೇಳಿದರು.
ಅವರು ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಹೈಟೆಕ್ ಕಂಪ್ಯೂಟರ್ ಲ್ಯಾಬ್ ಉದ್ಘಾಟಿಸಿ ಮಾತನಾಡಿದರು.
ಅನ್ನದಾನ, ರಕ್ತದಾನಕ್ಕಿಂತಲೂ ವಿದ್ಯಾದಾನ ಶ್ರೇಷ್ಠವಾಗಿದೆ. ಹೀಗಾಗಿಯೇ ಹಿಂದಿನ ಕಾಲದಲ್ಲಿ ಮಠಗಳಲ್ಲಿ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿತ್ತು. ಪ್ರಸ್ತುತ ದಿನಗಳಲ್ಲಿ ಶಿಕ್ಷಕರಿಂದ ಮಾತ್ರ ಮಕ್ಕಳಲ್ಲಿ ಕೌಶಲ್ಯಾಭಿವೃದ್ಧಿ ಸಾಧ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು. ಮಕ್ಕಳ ಜ್ಞಾನ ವೃದ್ಧಿಗೆ ಕಂಪ್ಯೂಟರ್ ಶಿಕ್ಷಣ ಅತೀ ಅಗತ್ಯವಾಗಿದೆ. ಮಕ್ಕಳು ಪಡೆಯುವ ಶಿಕ್ಷಣ ಒಳ್ಳೆಯ ಕೆಲಸಗಳಿಗೆ ಬಳಕೆಯಾಗಬೇಕು. ಕೌಶಲ್ಯಗಳು ಪರರಿಗೆ ಉಪಯೋಗವಾಗುವಂತಿರಬೇಕು. ಭಾರತೀಯ ಸಂಸ್ಕೃತಿ, ದೇಶ ರಕ್ಷಣೆ ಸಹಾಯಕವಾಗಬಲ್ಲ ಸೂಕ್ತ ಶಿಕ್ಷಣ ಮಕ್ಕಳಿಗೆ ದೊರೆಯಬೇಕು ಎಂದರು. ಸುಶಿಕ್ಷಿತರು ಪ್ರತಿಭಾ ಪಲಾಯನ ಮಾಡುವ ಬದಲು ದೇಶ ಸೇವೆಗೆ ಒತ್ತು ನೀಡಬೇಕು ಎಂದು ಕರೆ ನೀಡಿದರು. ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಅವರು ಮಾತನಾಡಿ, ಮುಂದಿನ ವರ್ಷದಿಂದ ವಿಶ್ವದರ್ಶನ ಶಿಕ್ಷಣ ಸಂಸ್ಥೆಯೂ ಸಿ.ಬಿ.ಎಸ್.ಸಿ ಶಿಕ್ಷಣ ಪದ್ದತಿಯನ್ನು ಅಳವಡಿಸಿಕೊಳ್ಳಲಿದೆ. ಇದಕ್ಕೆ ಪುರಕವಾಗಿ ಗ್ರಾಮೀಣ ಭಾಗದ ವಿದ್ಯಾರ್ಥಿಗಳ ಅನುಕೂಲಕ್ಕೆ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಇದರ ಜೊತೆ ಮೌಲ್ಯಾಧಾರಿತ ಶಿಕ್ಷಣಕ್ಕೆ ಒತ್ತು ನೀಡಲಾಗುತ್ತಿದೆ ಎಂದರು. ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ ಅವರು ಗಣ್ಯರಿಗೆ ನೆನಪಿನ ಕಾಣಿಕೆ ನೀಡಿ ಗೌರವಿಸಿದರು. ಮುಖ್ಯಾಧ್ಯಾಪಕ ಗಣೇಶ ಭಟ್ಟ ಪ್ರಸ್ತಾಪಿಸಿದರು. ದತ್ತಾತ್ರೇಯ ಗಾಂವ್ಕರ ನಿರ್ವಹಿಸಿದರು.
