ಮಕ್ಕಳ ಕೋವಿಡ್ ಲಸಿಕೆ ಕುರಿತು ಭಯ ಬೇಡ

ಯಲ್ಲಾಪುರ ತಾಲೂಕಿನ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಸೋಮವಾರ 15ರಿಂದ 18 ವರ್ಷದ ಮಕ್ಕಳಿಗಾಗಿ ಕೋವಿಡ್ ಲಸಿಕಾ ಅಭಿಯಾನ ನಡೆದಿದ್ದು, ಇದಕ್ಕೆ ಇಡಗುಂದಿ ಗ್ರಾ.ಪಂ ಉಪಾಧ್ಯಕ್ಷರಾದ ರೇಣುಕಾ ಮಂಜುನಾಥ ಪೈಗಣಕರ್ ಅವರು ಚಾಲನೆ ನೀಡಿದರು. ವಜ್ರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸುರೇಶ ಹಂಜಗಿ, ಡಾ. ಶಂಕರ್, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಶಾಲೆಯ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ, ಡಾ.ನವೀನಕುಮಾರ ಎಜಿ ಚಿತ್ರದಲ್ಲಿದ್ದಾರೆ.

ಯಲ್ಲಾಪುರ: ರೂಪಾಂತರಿ ಕೊರೊನಾ ವೈರಸ್ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಕಾರಣ ಈ ರೋಗದ ಕುರಿತು ಯಾರೂ ನಿರ್ಲಕ್ಷ ಮಾಡುವಂತಿಲ್ಲ. ಕೋವಿಡ್ ತಡೆಗೆ ಸರ್ಕಾರ ನಿರಂತರವಾಗಿ ಪ್ರಯತ್ನಿಸುತ್ತಿದ್ದು ಸಾರ್ವಜನಿಕರು ಸಹಕರಿಸಬೇಕಿದೆ ಎಂದು ವಜ್ರಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿಗಳಾದ ಡಾ. ಸುರೇಶ ಹಂಜಗಿ ಮನವಿ ಮಾಡಿದರು.
    ಅವರು ಸೋಮವಾರ ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಮಕ್ಕಳಿಗಾಗಿ ಹಮ್ಮಿಕೊಂಡ ಕೋವಿಡ್ ಲಸಿಕಾ ಅಭಿಯಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
   ಕೊರೊನಾ ವಿರುದ್ಧ ಹೋರಾಡಲು ಅನೇಕರು ದುಡಿಯುತ್ತಿದ್ದಾರೆ. ಆದಷ್ಟು ಬೇಗ ಕೊರೊನಾ ಮುಕ್ತ ಭಾರತ ನಿರ್ಮಾಣದ ಗುರಿ ಹೊಂದಲಾಗಿದೆ. ಇದಕ್ಕಾಗಿ 15ರಿಂದ 18 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕುವ ಅಭಿಯಾನ ನಡೆಯುತ್ತಿದೆ. ಪಾಲಕರು ಧೈರ್ಯದಿಂದ ಮಕ್ಕಳಿಗೆ ಲಸಿಕೆ ಹಾಕಿಸಬೇಕು ಎಂದು ಅವರು ಹೇಳಿದರು. ಕೊರೊನಾ ರೋಗ ಹಾಗೂ ಲಸಿಕೆ ಕುರಿತು ಅನೇಕ ವದಂತಿಗಳು ಹಬ್ಬುತ್ತಿದೆ. ಜನರು ವದಂತಿಗಳಿಗೆ ಕಿವಿ ಕೊಡಬಾರದು. ಸರ್ಕಾರದ ಅಧಿಕೃತ ಪ್ರಕಟಣೆಗಳನ್ನು ಮಾತ್ರ ನಂಬಬೇಕು ಎಂದು ಅವರು ತಿಳಿಸಿದರು. ಪ್ರಸ್ತುತ ರೋಗ ಹರಡುವಿಕೆ ತಡೆ ಮುಖ್ಯ ಗುರಿಯಾಗಿದೆ ಎಂದರು.
  ಇಡಗುಂದಿ ಗ್ರಾಮ ಪಂಚಾಯತ ಉಪಾಧ್ಯಕ್ಷರಾದ ರೇಣುಕಾ ಮಂಜುನಾಥ ಪೈಗಣಕರ್ ಅವರು ಕಾರ್ಯಕ್ರಮ ಉದ್ಘಾಟಿಸಿದರು. ವೈದ್ಯಾಧಿಕಾರಿಗಳಾದ ಡಾ. ಶಂಕರ್, ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಶಾಲೆಯ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ ವೇದಿಕೆಯಲ್ಲಿದ್ದರು. ಡಾ.ನವೀನಕುಮಾರ ಎಜಿ ಸ್ವಾಗತಿಸಿ, ವಂದಿಸಿದರು. ಸ್ಥಳದಲ್ಲಿ 64 ವಿದ್ಯಾರ್ಥಿಗಳು ಲಸಿಕೆ ಪಡೆದರು.

Leave a Reply

Your email address will not be published. Required fields are marked *