ಯಶಸ್ಸಿಗೆ ಶಿಸ್ತು ಹಾಗೂ ಶ್ರದ್ಧೆ ಅಗತ್ಯ

ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ)ದಲ್ಲಿ ಶುಕ್ರವಾರ ನಡೆದ ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರಶಸ್ತಿ ವಿತರಣಾ ಸಮಾರಂಭವನ್ನು ನಿವೃತ್ತ ತಹಶೀಲ್ದಾರ್ ಡಿ.ಜಿ ಹೆಗಡೆ ಅವರು ಉದ್ಘಾಟಿಸಿದರು.

ಯಲ್ಲಾಪುರ: ನಾವು ಮಾಡುವ ಕೆಲಸವನ್ನು ಪ್ರೀತಿ ಹಾಗೂ ಶ್ರದ್ಧೆಯಿಂದ ಮಾಡಿದಾಗ ಯಶಸ್ಸು ಸಾಧ್ಯ ಎಂದು ನಿವೃತ್ತ ತಹಶೀಲ್ದಾರ್ ಡಿ.ಜಿ ಹೆಗಡೆ ಹೇಳಿದರು.
   ಶುಕ್ರವಾರ ಅವರು ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ)ದಲ್ಲಿ ನಡೆದ ವಾರ್ಷಿಕ ಕ್ರೀಡಾ ಹಾಗೂ ಸಾಂಸ್ಕೃತಿಕ ಪ್ರಶಸ್ತಿ ವಿತರಣಾ ಸಮಾರಂಭ ಉದ್ಘಾಟಿಸಿ ಮಾತನಾಡಿದರು.
  ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದ್ದು, ಉತ್ತಮ ಸಮಾಜವನ್ನು ರೂಪಿಸುವ ಹೊಣೆಗಾರಿಕೆ ಪ್ರತಿಯೊಬ್ಬ ಶಿಕ್ಷಕರ ಮೇಲಿದೆ. ವೃತ್ತಿ ಜೀವನದಲ್ಲಿ ಎಲ್ಲರೂ ಮಾನವೀಯ ನೆಲೆಯಲ್ಲಿ ಕೆಲಸ ಮಾಡಬೇಕು. ಜೀವನದಲ್ಲಿ ಪ್ರತಿಯೊಬ್ಬರಿಗೂ ಶಿಸ್ತು ಅಗತ್ಯ. ದಕ್ಷತೆ, ಸಮಯ ಪಾಲನೆ ಹಾಗೂ ನಿಷ್ಟೆಯಿಂದ ಮಾಡುವ ಕೆಲಸ ಶ್ರೇಯಸ್ಸು ತಂದುಕೊಡುತ್ತದೆ ಎಂದು ಅವರು ಹೇಳಿದರು. ವೃತ್ತಿ ಜೀವನಕ್ಕೆ ಕಾಲಿಟ್ಟ ನಂತರ ಸಾಕಿದ ತಂದೆ-ತಾಯಿ, ವಿದ್ಯೆ ನೀಡಿದ ಗುರು ಹಾಗೂ ಸಹಾಯ ಮಾಡಿದ ಗೆಳೆಯರನ್ನು ಯಾರೂ ಮರೆಯಬಾರದು. ಈಚೆಗೆ ಪಾಲಕರನ್ನು ವೃದ್ದಾಶ್ರಮಗಳಿಗೆ ಸೇರಿಸುವವರ ಸಂಖ್ಯೆ ಹೆಚ್ಚಾಗಿದ್ದು, ಇಳಿ ವಯಸ್ಸಿನವರನ್ನು ನೋಡಿಕೊಳ್ಳುವ ಹೊಣೆಗಾರಿಕೆ ಅವರವರ ಮಕ್ಕಳ ಮೇಲಿದೆ ಎಂದರು.
   ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ವಿಶ್ವದರ್ಶನ ಶಿಕ್ಷಣ ಮಹಾ ವಿದ್ಯಾಲಯ (ಬಿ.ಇಡಿ)ದ ಪ್ರಾಚಾರ್ಯರಾದ ಎಸ್.ಎಲ್ ಭಟ್ಟ, ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯ ಪ್ರಾಚಾರ್ಯರಾದ ಗಣೇಶ ಭಟ್ಟ ವೇದಿಕೆಯಲ್ಲಿದ್ದರು. ಸನ್ನಿಧಿ ಹೆಗಡೆ ಪ್ರಾರ್ಥಿಸಿದರು. ಮಹೇಶ ಭಟ್ಟ ಪರಿಚಯಿಸಿದರು. ದೀಪಶ್ರೀ ಭಟ್ಟ ನಿರ್ವಹಿಸಿದರು. ಪ್ರೀತಿ ಮರಾಠೆ ವಂದಿಸಿದರು. 

Leave a Reply

Your email address will not be published. Required fields are marked *