ಯಲ್ಲಾಪುರ: ಎಲ್ಲಾ ರೀತಿಯ ರೋಗಗಳನ್ನು ದೂರ ಮಾಡುವ ಶಕ್ತಿ ಗಿಡ ಮೂಲಿಕೆಗಳಿಗಿವೆ. ವಿದ್ಯಾರ್ಥಿಗಳು ಸಸ್ಯ ಪ್ರಬೇಧ ಹಾಗೂ ಅವುಗಳ ಔಷಧೀಯ ಸತ್ವದ ಬಗ್ಗೆ ಅರಿವು ಹೊಂದಿರಬೇಕು ಎಂದು ಇಡಗುಂದಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯಾಧ್ಯಪಕರಾದ ಗಣಪತಿ ಗೌಡ ಹೇಳಿದರು.
ಅವರು ಇಡಗುಂದಿಯ ವಿಶ್ವದರ್ಶನ ಪ್ರೌಢಶಾಲೆಯಲ್ಲಿ ಸಮೃದ್ಧಿ ಇಕೋ ಕ್ಲಬ್ ವತಿಯಿಂದ ನಡೆದ “ಧನ್ವಂತರಿ ದಿನಾಚರಣೆ” ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಆಯುರ್ವೇದ ಚಿಕಿತ್ಸಾ ಪದ್ದತಿಯಿಂದ ಎಲ್ಲಾ ರೋಗಗಳ ಪರಿಹಾರ ಸಾಧ್ಯ. ಆಯುರ್ವೇದದಿಂದ ಆರೋಗ್ಯದ ಮೇಲೆಯೂ ಯಾವುದೇ ದುಷ್ಪರಿಣಾಮಗಳಿಲ್ಲ ಎಂದು ಅವರು ತಿಳಿಸಿದರು. ಎಲ್ಲಾ ರೋಗಗಳಿಗೂ ಆಯುರ್ವೇದಲ್ಲಿ ಔಷಧಿಗಳಿವೆ. ಈಚೆಗೆ ಜನ ಆಲೋಪತಿಗಿಂತ ಹೆಚ್ಚು ಆಯುರ್ವೇದ ಚಿಕಿತ್ಸೆಗೆ ಒತ್ತು ನೀಡುತ್ತಿದ್ದಾರೆ. ವಿದ್ಯಾರ್ಥಿಗಳು ಸಹ ಗಿಡ ಮೂಲಕೆಗಳ ಮಹತ್ವ ಅರಿತಿರಬೇಕು ಎಂದು ಅವರು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ವಿಶ್ವದರ್ಶನ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಪ್ರಸನ್ನ ಹೆಗಡೆ ಅವರು ಮಾತನಾಡಿ, ಆರೋಗ್ಯ ರಕ್ಷಣೆಗಾಗಿ ಜನ ಆಯುರ್ವೇದದ ಮೊರೆ ಹೋಗುವುದು ಅನಿವಾರ್ಯವಾಗಿದೆ ಎಂದರು. ಶಿಕ್ಷಕರಾದ ಲತಾ ಹೆಗಡೆ, ನವೀನ ಗುನಗಾ, ರಾಘವೇಂದ್ರ ಹೆಗಡೆ, ವಿಶ್ವೇಶ್ವರ ಗಾಂವ್ಕರ್ ಕಾರ್ಯಕ್ರಮದಲ್ಲಿದ್ದರು. ಈ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಸಂಗ್ರಹಿಸಿದ್ದ ವಿವಿಧ ಗಿಡ ಮೂಲಿಕೆಗಳ ಪ್ರದರ್ಶನ ನಡೆಯಿತು. ರಾಜೀವ ಗಾಂವ್ಕರ್ ನಿರ್ವಹಿಸಿದರು. ಪಲ್ಲವಿ ಭಟ್ಟ ಸ್ವಾಗತಿಸಿದರು. ಮಾನಸಾ ಶೇಟ್ ವಂದಿಸಿದರು.