ಭಗವದ್ಗೀತೆ ಅನುಕರಣೆಯಿಂದ ಯಶಸ್ಸು ಸಾಧ್ಯ

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 8 ದಿನಗಳಿಂದ ನಡೆದ ಗೀತಾಭಿಯಾನ ಮುಕ್ತಾಯ ಮತ್ತು ಗೀತಾ ಜಯಂತಿ ಆಚರಣಾ ಕಾರ್ಯಕ್ರಮವನ್ನು ಕರಡೊಳ್ಳಿಯ ಗೋವರ್ಧನ ಟ್ರಸ್ಟ್ ಕಾರ್ಯದರ್ಶಿ ವೇ.ಗಣಪತಿ ಭಟ್ಟ ಕೋಲಿಬೇಣ ಉದ್ಘಾಟಿಸಿದರು

ಯಲ್ಲಾಪುರ: ವಿದ್ಯಾರ್ಥಿ ಜೀವನದಲ್ಲಿಯೇ ಶ್ರದ್ಧಾ, ಮೇಧ, ಪ್ರಜ್ಞಾ ಎಂಬ ಮೂರು ಶಕ್ತಿಗಳನ್ನು ರೂಡಿಸಿಕೊಂಡವರು ಅಸಾಮಾನ್ಯ ವ್ಯಕ್ತಿಯಾಗಿ ಬೆಳೆಯುತ್ತಾರೆ ಎಂದು ಕರಡೊಳ್ಳಿಯ ಗೋವರ್ಧನ ಟ್ರಸ್ಟ್ ಕಾರ್ಯದರ್ಶಿ ವೇ.ಗಣಪತಿ ಭಟ್ಟ ಕೋಲಿಬೇಣ ಹೇಳಿದರು.
ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ 8 ದಿನಗಳಿಂದ ನಡೆದ ಗೀತಾಭಿಯಾನ ಮುಕ್ತಾಯ ಮತ್ತು ಗೀತಾ ಜಯಂತಿ ಆಚರಣಾ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಾಲ್ಯಾವಸ್ಥೆಯಲ್ಲಿ ಶ್ರದ್ಧಾ, ಮೇಧಾ, ಪ್ರಜ್ಞಾ ಎಂಬ ಮೂರು ಶಕ್ತಿಗಳನ್ನು ಬೆಳೆಸಿಕೊಳ್ಳಲು ಸೂಕ್ತ ಮಾರ್ಗದರ್ಶನದ ಅಗತ್ಯವಿರುತ್ತದೆ. ಭಗವದ್ಗೀತೆಯ ಶ್ಲೋಕಪಠಣ ಅಭ್ಯಾಸ ಹಾಗೂ ಅರ್ಥೈಸಿಕೊಳ್ಳುವ ಮೂಲಕ ಮೂರು ಶಕ್ತಿಗಳನ್ನು ರೂಢಿಸಿಕೊಳ್ಳಲು ಸಾಧ್ಯವಾಗುತ್ತದೆ. ಆ ನಿಟ್ಟಿನಲ್ಲಿ ವಿದ್ಯಾಸಂಸ್ಥೆಯಲ್ಲಿ ಗೀತಾ ಪಠಣ, ಗೀತಾ ಜಯಂತಿ ಆಚರಿಸುತ್ತಿರುವುದು ಸಂತಸದಾಯಕ ಎಂದು ಹೇಳಿದರು. ನಾವು ಶಿಸ್ತುಬದ್ಧ, ಯಶಸ್ವಿ ಜೀವನ ನಡೆಸಲು ಬದುಕಿನಲ್ಲಿ ಅಳವಡಿಸಿಕೊಳ್ಳಬಹುದಾದ ಶಾಸನಗಳು ಭಗವದ್ಗೀತೆಯಲ್ಲಿ ಹೇರಳವಾಗಿವೆ. ಕರ್ಮ, ಭಕ್ತಿ, ಜ್ಞಾನ, ಧ್ಯಾನ ಎಂಬ ಭದ್ರ ಬುನಾದಿಯನ್ನು ಹೊಂದಿದ್ದು, ವಿದ್ಯಾರ್ಜನೆ ಎಂಬ ಕರ್ಮವನ್ನು ಶ್ರದ್ಧೆಯಿಂದ ಮಾಡಿದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂದರು. ಶ್ಲೋಕ ಪಠಣದಿಂದ ಶೋಕ ದೂರವಾಗುತ್ತದೆ. ಮನುಕುಲವನ್ನು ಉದ್ಧರಿಸುವ ಜೀವ ಜಲದಂತೆ ಗೀತೆ ಇದೆ. ಹೀಗಾಗಿಯೇ ಸೋಂದಾ ಸ್ವರ್ಣವಲ್ಲಿಯ ಗಂಗಾಧರೇAದ್ರ ಸರಸ್ವತೀ ಸ್ವಾಮೀಜಿ 13 ವರ್ಷಗಳಿಂದ ಮನೆ-ಮನಗಳಲ್ಲಿ ಗೀತೆ ಸದಾ ಪಠಣವಾಗಬೇಕೆಂಬ ಅಭಿಯಾನ ಹಮ್ಮಿಕೊಂಡಿದ್ದಾರೆ ಎಂದರು. ಪ್ರಭಾತ ಭಟ್ಟ ಸಂಗಡಿಗರು ಪ್ರಾರ್ಥಿಸಿದರು. ಮುಖ್ಯಾಧ್ಯಾಪಕಿ ಮುಕ್ತಾ ಶಂಕರ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಪ್ರಾರ್ಥನಾ ಭಟ್ಟ ನಿರ್ವಹಿಸಿದರು. ಪ್ರತೀಕ್ಷಾ ಭಟ್ಟ ವಂದಿಸಿದರು.

Leave a Reply

Your email address will not be published. Required fields are marked *