ಕನ್ನಡ ಭಾಷೆ ಉಳಿವಿಗಾಗಿ ಇರುವ ದೊಡ್ಡ ಮಾರ್ಗ ಯಕ್ಷಗಾನ

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಪ್ರಶಸ್ತಿ ವಿತರಣಾ ಕಾರ್ಯಕ್ರಮವನ್ನು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ಜಿ.ಎಲ್ ಹೆಗಡೆ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ, ಸಂಸ್ಥೆಯ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ್, ಪ್ರಮುಖರಾದ ಎನ್.ಎಸ್ ಭಟ್ಟ, ದಾಮೋಧರ ಭಟ್ಟ ಚಿತ್ರದಲ್ಲಿದ್ದಾರೆ.

ಯಲ್ಲಾಪುರ: ಸತತ ಅಧ್ಯಯನ ಹಾಗೂ ಸಾಧನೆಯ ಮೂಲಕ ಪ್ರತಿಯೊಬ್ಬರು ಗುರುವಿನ ಋಣ ತೀರಿಸಲು ಪ್ರಯತ್ನಿಸಬೇಕು ಎಂದು ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ಜಿ.ಎಲ್ ಹೆಗಡೆ ಅವರು ಹೇಳಿದರು.
ಅವರು ಶನಿವಾರ ಪಟ್ಟಣದ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಸಮಾಜದಿಂದ ಪಡೆದದನ್ನು ಸಮಾಜಕ್ಕೆ ನೀಡುವುದು ಪ್ರತಿಯೊಬ್ಬರ ಕರ್ತವ್ಯ. ಶಾಲೆಯಲ್ಲಿ ಕಲಿತ ಮಕ್ಕಳು ದೊಡ್ಡವರಾದ ನಂತರ ಸಮಾಜಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು ಎಂದರು. ಶಿಕ್ಷಕ ವೃತ್ತಿ ಅತ್ಯಂತ ಶ್ರೇಷ್ಠವಾಗಿದೆ. ನಿರಂತರ ಅಧ್ಯಯನ, ಸತತ ಪ್ರಯತ್ನದಿಂದ ಸಾಧನೆ ಸಾಧ್ಯವಿದೆ. ಪಾಸ್ ಬುಕ್ ಹಾಗೂ ಫೇಸ್ ಬುಕ್ ಓದುವವರ ನಡುವೆ ಪುಸ್ತಕ ಓದುವ ಸಂಸ್ಕೃತಿಯನ್ನು ಇನ್ನಷ್ಟು ಬೆಳಸಬೇಕಿದೆ ಎಂದು ಹೇಳಿದರು.

ಶತ ಶತಮಾನಗಳಿಂದ ಇಲ್ಲಿನ ಜನ ಯಕ್ಷಗಾನ ಕಲೆಯನ್ನು ಉಳಿಸಿಕೊಂಡು ಬಂದಿದ್ದಾರೆ. ಯಕ್ಷಗಾನದ ಚೌಕಿಮನೆ ಎಂಬುದೇ ಒಂದು ವಿಶ್ವ ವಿದ್ಯಾಲಯವಾಗಿದೆ. ದೇವರಿಗೆ ಭಜನೆ, ಕುಣಿತ ಅತ್ಯಂತ ಪ್ರಿಯವಾದದ್ದಾಗಿದೆ. ಯಕ್ಷಗಾನ ಇರುವವರೆಗೆ ಕನ್ನಡ ಭಾಷೆ ಸೃಜನಶೀಲತೆಯಿಂದ ಕೂಡಿರುತ್ತದೆ. ಜಗತ್ತಿನಲ್ಲಿ ಯಕ್ಷಗಾನದಂತಹ ಅದ್ಬುತ ಕಲೆ ಬೇರೆ ಇಲ್ಲ ಎಂಬುದು ನಮ್ಮೆಲ್ಲರ ಹೆಮ್ಮೆ ಎಂದರು.

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಕರ್ನಾಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷರಾದ ಡಾ. ಜಿ.ಎಲ್ ಹೆಗಡೆ ಅವರನ್ನು ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಅವರು ಸನ್ಮಾನಿಸಿದರು. ಪ್ರಮುಖರಾದ ಮುಕ್ತಾ ಶಂಕರ್, ಡಾ. ದತ್ತಾತ್ರೇಯ ಗಾಂವ್ಕರ್, ಶ್ಯಾಮಲಾ ಕೆರೆಗದ್ದೆ, ಪ್ರೇಮಾ ಗಾಂವ್ಕರ್ ಮೊದಲಾದವರು ಚಿತ್ರದಲ್ಲಿದ್ದಾರೆ.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿಗಳಾದ ನರಸಿಂಹ ಕೋಣೆಮನೆ ಅವರು ಮಾತನಾಡಿ, ವಿಶ್ವದರ್ಶನ ಶಿಕ್ಷಣ ಸಂಸ್ಥೆಯಲ್ಲಿ ಶೀಘ್ರದಲ್ಲಿಯೇ ಯಕ್ಷಗಾನ ತರಬೇತಿ ಪ್ರಾರಂಭಿಸುವ ಬಗ್ಗೆ ಘೋಷಿಸಿದರು. ಕನ್ನಡ ಉಳುವಿಗಾಗಿ ಇರುವ ದೊಡ್ಡ ಮಾರ್ಗವಾದ ಯಕ್ಷಗಾನಕ್ಕೆ ವಿಶ್ವ ಕನ್ನಡ ಸಮ್ಮೇಳನದಲ್ಲಿ ಪ್ರಾಮುಖ್ಯತೆ ನೀಡಲು ಯಕ್ಷಗಾನ ಅಕಾಡೆಮಿ ಉದ್ದೇಶಿಸಿರುವದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.

ವಿವಿಧ ಸ್ಪರ್ಧಾ ವಿಜೇತರಿಗೆ ಗಣ್ಯರು ಪ್ರಶಸ್ತಿ ವಿತರಿಸಿದರು. ಉಪನ್ಯಾಸಕರಾದ ಡಾ. ದತ್ತಾತ್ರೇಯ ಗಾಂವ್ಕರ್ ಅಭಿನಂದನಾ ನುಡಿಗಳನ್ನಾಡಿದರು. ಯಕ್ಷ ಕಲಾವಿದರಾದ ಅನಂತ ಹೆಗಡೆ ದಂತಳಿಗೆ ಮಾತನಾಡಿದರು. ಕಾರ್ಯಕ್ರಮದಲ್ಲಿ ವಿವಿಧ ಅಂಗಸoಸ್ಥೆಯ ಮುಖ್ಯಸ್ಥರು ಹಾಜರಿದ್ದರು. ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ್ ಸ್ವಾಗತಿಸಿದರು. ಪ್ರಭಾತ ಎಸ್ ಭಟ್ಟ ಪ್ರಾರ್ಥಿಸಿದರು. ಶ್ಯಾಮಲಾ ಕೆರೆಗದ್ದೆ ಅಭಿನಂಧನಾ ಪತ್ರ ವಾಚಿಸಿದರು. ಪ್ರೇಮಾ ಗಾಂವ್ಕರ್ ನಿರ್ವಹಿಸಿದರು. ಗೀತಾ ಎಚ್.ವಿ ವಂದಿಸಿದರು.


Leave a Reply

Your email address will not be published. Required fields are marked *