ವಿಶ್ವದರ್ಶನದಲ್ಲಿ ಗಮನ ಸೆಳೆದ ಹರಿಕಥೆ

ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಕನಕ ಜಯಂತಿ ಅಂಗವಾಗಿ ಭಕ್ತ ಕನಕದಾಸ ಕಥಾ ಕಾಲಕ್ಷೇಪ ಎಂಬ ಹರಿಕಥೆ ನಡೆಯಿತು. ಶ್ರೀಶಾರದಾಂಬಾ ದೇವಸ್ಥಾನದ ವ್ಯವಸ್ಥಾಪಕರಾದ ಅಶೋಕ ಶೆಟ್ಟಿ ಅವರು ದೀಪ ಬೆಳಗಿಸಿ ಕಾರ್ಯಕ್ರಮ ಉದ್ಘಾಟಿಸಿದರು

ಯಲ್ಲಾಪುರ: ಕನಕ ಜಯಂತಿ ಅಂಗವಾಗಿ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯಲ್ಲಿ ಸೋಮವಾರ ವಿವಿಧ ಸಂಘಟನೆಗಳ ಆಶ್ರಯದಲ್ಲಿ ನಡೆದ ಹರಿಕಥೆ ಗಮನ ಸೆಳೆಯಿತು.
   ಕನ್ನಡ ಅಭಿವೃದ್ಧಿ ಪ್ರಾಧಿಕಾರ, ಜಿಲ್ಲಾ ಕನ್ನಡ ಜಾಗೃತ ಸಮಿತಿ ಯಲ್ಲಾಪುರ ಹಾಗೂ ವಿಶ್ವದರ್ಶನ ಶಿಕ್ಷಣ ಸಂಸ್ಥೆ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ಸಂಘಟಿಸಲಾಗಿತ್ತು. ಈ ಕಾರ್ಯಕ್ರಮದಲ್ಲಿ ಕಥಾಕೀರ್ತನ ಕೋವಿದ ಸಿರಿವಿಠ್ಠಲ ಅಂಕಿತ ಈಶ್ವರದಾಸ ಕೊಪ್ಪೇಸರ ಅವರು `ಭಕ್ತ ಕನಕದಾಸ’ ಕಥಾ ಕಾಲಕ್ಷೇಪ ಎಂಬ ಹರಿಕಥೆಯನ್ನು ನಡೆಸಿಕೊಟ್ಟರು. ರಾಮಚಂದ್ರ ಹೆಗಡೆ ಕೋಣೆಸರ ಅವರು ಹಾರ್ಮೋನಿಯಂ ಹಾಗೂ ಪ್ರದೀಪ ಕೋಟೆಮನೆ ಅವರು ತಬಲಾ ಸಾತ್ ನೀಡಿದರು.
     ಸಭಾ ಕಾರ್ಯಕ್ರಮವನ್ನು ಶ್ರೀಶಾರದಾಂಬಾ ದೇವಸ್ಥಾನದ ವ್ಯವಸ್ಥಾಪಕರಾದ ಅಶೋಕ ಶೆಟ್ಟಿ ದೀಪ ಬೆಳಗಿಸಿ ಉದ್ಘಾಟಿಸಿದರು. ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವ್ಯವಸ್ಥಾಪಕರಾದ ಗುರುರಾಜ ಕುಂದಾಪುರ, ಪ್ರಮುಖರಾದ ಗಂಗಾ ಭಟ್ಟ ಹಿತ್ಲಕಾರಗದ್ದೆ ಮೊದಲಾದವರು ಇದ್ದರು. ಜಿಲ್ಲಾ ಕನ್ನಡ ಜಾಗೃತಿ ಸಮಿತಿ ಸದಸ್ಯೆ ಹಾಗೂ ವಿಶ್ವದರ್ಶನ ಕನ್ನಡ ಮಾಧ್ಯಮ ಪ್ರೌಢಶಾಲೆಯ ಮುಖ್ಯಾಧ್ಯಾಪಕರಾದ ಮುಕ್ತಾ ಶಂಕರ್ ಸ್ವಾಗತಿಸಿ, ವಂದಿಸಿದರು.

Leave a Reply

Your email address will not be published. Required fields are marked *