
ಯಲ್ಲಾಪುರ: ಬಾಲ್ಯ ವಿವಾಹ, ಬಾಲ ಬಿಕ್ಷಾಟನೆ ಸೇರಿದಂತೆ ಮಕ್ಕಳ ಮೇಲೆ ನಡೆಯುವ ದೌರ್ಜನ್ಯಗಳ ವಿರುದ್ಧ ಹೋರಾಡಲು ವಿದ್ಯಾರ್ಥಿಗಳು ಧ್ವನಿ ಎತ್ತಬೇಕು ಎಂದು ಪಟ್ಟಣ ಪೊಲೀಸ್ ಠಾಣೆಯ ಎ.ಎಸ್.ಐ ದೀಪಕ ನಾಯ್ಕ ಮನವಿ ಮಾಡಿದರು.
ಸೋಮವಾರ ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಡೆದ ಜಾಗೃತಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮಹಿಳೆ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆಗೆ 10ಕ್ಕೂ ಅಧಿಕ ಇಲಾಖೆಗಳು ಕೆಲಸ ಮಾಡುತ್ತಿದೆ. ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ಪೊಲೀಸರು ಸಹ ಸಾಕಷ್ಟು ಶ್ರಮಿಸುತ್ತಿದ್ದಾರೆ. ಇದಕ್ಕೆ ಸಾರ್ವಜನಿಕರ ಸಹಕಾರವೂ ಅಗತ್ಯ ಎಂದು ಅವರು ಹೇಳಿದರು. ಹುಟ್ಟಿನಿಂದ ಸಾವಿನವರೆಗೂ ಪ್ರತಿಯೊಬ್ಬರಿಗೂ ಅನೇಕ ಹಕ್ಕುಗಳಿವೆ. ಶಿಕ್ಷಣ ಪಡೆಯುವದನ್ನು ಸೇರಿದಂತೆ ಮೂಲಭೂತ ಹಕ್ಕುಗಳಿಗೆ ದಕ್ಕೆ ಉಂಟಾಗದAತೆ ನೋಡಿಕೊಳ್ಳುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.
ಆರಕ್ಷಕ ಸಿಬ್ಬಂದಿ ಷೇಶು ಮರಾಠೆ ಮಾತನಾಡಿ, ಜನ ಸಂಚಾರ ಇಲ್ಲದ ಪ್ರದೇಶದಲ್ಲಿ ಓಡಾಡುವಾಗ ಎಚ್ಚರದಿಂದ ಇರಬೇಕು. ಅನಮಾನಾಸ್ಪದ ವ್ಯಕ್ತಿಗಳ ಬಗ್ಗೆ ಜನರು ಪೊಲೀಸರಿಗೆ ಮಾಹಿತಿ ನೀಡಬೇಕು ಎಂದು ಹೇಳಿದರು. ಇನ್ನೋರ್ವ ಆರಕ್ಷಕ ಸಿಬ್ಬಂದಿ ಅಮರ್ ಜಿ ಮಾತನಾಡಿ, ಅಪರಾಧಕ್ಕೆ ಸಂಬAಧಿಸಿ ಯಾವುದೇ ಸುಳಿವು ಇದ್ದರೂ ಅದನ್ನು ತಿಳಿಸಬೇಕು. ಅಪ್ರಾಪ್ತ ಮಕ್ಕಳಿಗೆ ಪಾಲಕರು ವಾಹನಗಳನ್ನು ನೀಡುವುದು ಅಪರಾಧವಾಗಿದೆ. ಅಪ್ರಾಪ್ತ ಮಕ್ಕಳಿಗೆ ವಾಹನ ನೀಡಿದರೆ ಪಾಲಕರನ್ನು ಹೋಣೆಗಾರರನ್ನಾಗಿ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ವಿಶ್ವದರ್ಶನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯಾಧ್ಯಾಪಕರಾದ ಗಣೇಶ ಭಟ್ಟ ಅಧ್ಯಕ್ಷತೆ ವಹಿಸಿದ್ದರು. ಉಪ ಪ್ರಾಚಾರ್ಯೆ ಆಸ್ಮಾ ಶೇಖ್ ವೇದಿಕೆಯಲ್ಲಿದ್ದರು. ಅನನ್ಯ ಹಳೆಮನೆ ಪ್ರಾರ್ಥಿಸಿದರು. ಡಾ. ದತ್ತಾತ್ರೇಯ ಗಾಂವ್ಕರ್ ಸ್ವಾಗತಿಸಿದರು. ಕವಿತಾ ಹೆಬ್ಬಾರ್ ನಿರ್ವಹಿಸಿದರು.