
ಯಲ್ಲಾಪುರ: ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು ಶನಿವಾರ ಪಟ್ಟಣದ ಪೊಲೀಸ್ ಠಾಣೆಗೆ ತೆರಳಿ ಪೊಲೀಸರ ಕರ್ತವ್ಯ ನಿರ್ವಹಣೆಯ ಕುರಿತು ಠಾಣೆಯ ಅಧಿಕಾರಿಗಳಿಂದ ಮಾಹಿತಿ ಪಡೆದರು.
ವಿದ್ಯಾರ್ಥಿಗಳಿಗೆ ಪೊಲೀಸ್ ಕರ್ತವ್ಯದ ಬಗ್ಗೆ ಅರಿವು ಮೂಡಿಸುವುದಕ್ಕಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಘಟಕ “ತೆರೆದ ಮನೆ” ಎಂಬ ಕಾರ್ಯಕ್ರಮವನ್ನು ರೂಪಿಸಿದೆ. ಅದರ ಅಂಗವಾಗಿ ವಿಶ್ವದರ್ಶನ ಶಿಕ್ಷಣ ಸಂಸ್ಥೆಯ ಕನ್ನಡ ಮಾಧ್ಯಮ ಶಾಲೆಯ ಮಕ್ಕಳು ಹಾಗೂ ಬಿ.ಇಡಿ ವಿದ್ಯಾರ್ಥಿಗಳು ಪೊಲೀಸ್ ಠಾಣೆಗೆ ಭೇಟಿ ನೀಡಿದರು. ಪೊಲೀಸ್ ನಿರೀಕ್ಷಕರಾದ ಸುರೇಶ್ ಯಳ್ಳೂರು ಅವರು ವಿದ್ಯಾರ್ಥಿಗಳನ್ನು ಬರಮಾಡಿಕೊಂಡು ಪೊಲೀಸ್ ಠಾಣೆಯ ಮಹತ್ವ ಹಾಗೂ ಅಲ್ಲಿನ ಕಾರ್ಯ ವಿಧಾನಗಳ ಬಗ್ಗೆ ಮಾಹಿತಿ ನೀಡಿದರು. ಕಾನೂನು ಅರಿವು ಹಾಗೂ ಸಾಮಾಜಿಕ ಜವಾಬ್ದಾರಿ ವಿಷಯದ ಕುರಿತು ಅವರು ಮಾತನಾಡಿದರು. ಇದಾದ ನಂತರ ಮಕ್ಕಳು ಪೊಲೀಸ್ ಠಾಣೆಯ ಒಳಗೆ ತೆರಳಿ ಕಚೇರಿ, ಬಂಧಿಖಾನೆ, ಠಾಣಾಧಿಕಾರಿಗಳ ಕರ್ತವ್ಯ ನಿರ್ವಹಣೆ ಮೊದಲಾದ ವಿಷಯಗಳ ಕುರಿತು ಅರಿತುಕೊಂಡರು. ಪಟ್ಟಣದ ವಿವಿಧ ರಸ್ತೆಗಳ ಮೂಲಕ ಜಾಥಾ ನಡೆಸಿ ಸಂಚರಿಸಿದ ವಿದ್ಯಾರ್ಥಿಗಳು ಜನಸ್ನೇಹಿ ಪೊಲೀಸ್ ವ್ಯವಸ್ಥೆಯ ಬಗ್ಗೆ ಅರಿವು ಮೂಡಿಸಿದರು. ಶಿಕ್ಷಕರು ಹಾಗೂ ಠಾಣೆಯ ಸಿಬ್ಬಂದಿ ಈ ವೇಳೆ ಹಾಜರಿದ್ದರು.
